ಕನ್ನಡ ನಾಡು | Kannada Naadu

 ಭಾರತದ ಭೇಟಿ ರದ್ದು ಪಡಿಸಿ ಚೀನಾಕ್ಕೆ ತೆರಳಿದ ಇಲಾನ್‌ ಮಸ್ಕ್‌ ...! 

28 Apr, 2024

ಬೆಂಗಳೂರು : ಭಾರತಕ್ಕೆ ಭೇಟಿ ರದ್ದುಪಡಿಸಿದ ಬೆನ್ನಲ್ಲೇ ಅಮೆರಿಕದ ಟೆಸ್ಲಾ ಕಂಪನಿ ಅಧ್ಯಕ್ಷ ಇಲಾನ್‌ ಮಸ್ಕ್‌ ಅವರು,  ಚೀನಾಕ್ಕೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಜೊತೆಗೆ ವಾಹನ ತಯಾರಿಕರಲ್ಲಿ ಹಾಗೂ ವಾಹನ ಮಾರುಕಟ್ಟೆಯಲ್ಲಿ ಇಲಾನ್‌ ಮಸ್ಕ್‌ ಅವರ ಚೀನಾ ಭೇಟಿಯನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.
 
         ಅಮೆರಿಕದ ಟೆಸ್ಲಾ ಕಂಪನಿ ಅಧ್ಯಕ್ಷ ಇಲಾನ್‌ ಮಸ್ಕ್‌ ಅವರು ಭಾರತ ಭೇಟಿ ರದ್ದುಗೊಳಿಸಿದ ಒಂದೇ ವಾರದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಚೀನಾಕ್ಕೆ ಇಂದು ಪ್ರಯಾಣ ಬೆಳೆಸಿದ್ದಾರೆ. ಈ ಕುರಿತ ವರದಿಯನ್ನು ರಾಯಿಟರ್ಸ್  ಸುದ್ದಿ ಸಂಸ್ಥೆ  ವರದಿಮಾಡಿದೆ.
 
          ಎಲೆಕ್ಟ್ರಿಕ್‌ ಕಾರು ತಯಾರಿಕೆಯಲ್ಲಿ ಚೀನಾವು ಜಾಗತಿಕ ಮಟ್ಟದಲ್ಲಿ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿನ ವಾಹನ ಮಾರುಕಟ್ಟೆಯಲ್ಲಿ ಟೆಸ್ಲಾ ಕಂಪನಿಯು ತನ್ನ ಸಂಪೂರ್ಣ ಸ್ವಯಂಚಾಲಿತ ವಾಹನ ತಂತ್ರಜ್ಞಾನವನ್ನು ಪರಿಚಯಿಸುವ ಸಾಧ್ಯತೆಯಿದೆ. ಹಾಗಾಗಿ, ಮಸ್ಕ್‌ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ತನ್ನ ಕಂಪನಿಯ ಮಾರುಕಟ್ಟೆ ವಿಸ್ತರಣೆಗೆ ಸಂಬಂಧಿಸಿದಂತೆ ಮಸ್ಕ್‌, ಚೀನಾ ಪ್ರಧಾನಿ ಲೀ ಕಿಯಾಂಗ್‌ ಅವರೊಟ್ಟಿಗೆ ಚರ್ಚಿಸಿದ್ದಾರೆ. ಈ ಇಬ್ಬರ ಭೇಟಿ ಬಗ್ಗೆ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ನ್ಯೂಸ್‌ ಏಜೆನ್ಸಿ ಸಹ  ವರದಿ ಮಾಡಿದೆ.
 
             ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೀನಾದ ಆಹ್ವಾನದ ಮೇರೆಗೆ ಮಸ್ಕ್‌ ಭೇಟಿ ನೀಡಿದ್ದಾರೆ. ಚೀನಾ ಕೌನ್ಸಿಲ್ ಫಾರ್ ದಿ ಪ್ರಮೋಷನ್ ಆಫ್ ಇಂಟರ್‌ನ್ಯಾಷನಲ್ ಟ್ರೇಡ್ (ಸಿಸಿಪಿಐಟಿ) ಅಧ್ಯಕ್ಷ ರೆನ್ ಹಾಂಗ್ಬಿನ್ ಅವರೊಟ್ಟಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
             ಸದ್ಯ ಅಲ್ಲಿ ಬೀಜಿಂಗ್‌ನಲ್ಲಿ ಆಟೊ ಶೋ ಆರಂಭವಾಗಿದೆ. ಇದರ ನಡುವೆಯೇ ಮಸ್ಕ್‌ ಭೇಟಿ ನೀಡಿದ್ದಾರೆ. ಚೀನಾದ ನೀತಿಗಳ ಬಗ್ಗೆ ಅಮೆರಿಕದಲ್ಲಿ ಕಳವಳ ವ್ಯಕ್ತವಾಗುತ್ತಿರುವ ನಡುವೆಯೇ ಅವರಿಗೆ ಕೆಂಪುಹಾಸಿಗೆಯ ಸ್ವಾಗತ ಸಿಕ್ಕಿದೆ. 2020ರಲ್ಲಿ ಶಾಂಘೈನಲ್ಲಿ ₹58 ಸಾವಿರ ಕೋಟಿ ವೆಚ್ಚದಲ್ಲಿ ಟೆಸ್ಲಾ ತನ್ನ ಘಟಕ ಸ್ಥಾಪಿಸಿತ್ತು. ಇದಾದ ಬಳಿಕ ಚೀನಾದಲ್ಲಿ ಕಂಪನಿಯ ಕಾರುಗಳು ಜನಪ್ರಿಯವಾಗಿವೆ.
 
              ಈ ಮಧ್ಯ ಭಾರತದಲ್ಲಿ ಟೆಸ್ಲಾ ಕಂಪನಿಯು ತನ್ನ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಹಾಗಾಗಿ ಏಪ್ರಿಲ್‌ 22ರಂದು ಮಸ್ಕ್‌ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಮಸ್ಕ್‌ ಕೂಡ ತಮ್ಮ ‘ಎಕ್ಸ್‌’ನಲ್ಲಿ ಖಚಿತಪಡಿಸಿದ್ದರು. ಕೊನೆಯ ಕ್ಷಣದಲ್ಲಿ ಅವರ ಭಾರತ ಪ್ರವಾಸ ರದ್ದಾಯಿತು. ಚೀನಾದಲ್ಲಿ ಸ್ಥಳೀಯ ಕಂಪನಿಗಳು ಟೆಸ್ಲಾಗೆ ಸವಾಲೊಡ್ಡಿವೆ. ಹಾಗಾಗಿ ಮಾರುಕಟ್ಟೆಯನ್ನು ಬಲಪಡಿಸುವ ಉದ್ದೇಶದಿಂದ ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
             ಕಳೆದ ಕೆಲವು ವರ್ಷಗಳಿಂದ ಚೀನಿ ಮಾರುಕಟ್ಟೆಯಲ್ಲಿ ಟೆಸ್ಲಾ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಳ್ಳಲು ಶೇ 6ರಷ್ಟು ಮಾರಾಟ ದರವನ್ನು ಕಡಿತಗೊಳಿಸಿದೆ. ಕಳೆದ ವರ್ಷ 3ಎಸ್‌ ಮತ್ತು ವೈಎಸ್‌ ಮಾದರಿಯ 6.03 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.  2012ರಲ್ಲಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸಿದ್ದ ಟೆಸ್ಲಾ ಇಲ್ಲಿಯವರೆಗೆ 17 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. 

Publisher: ಕನ್ನಡ ನಾಡು | Kannada Naadu

Login to Give your comment
Powered by